 ರಾಜನ ನ್ಯಾಯಸ್ಥಾನಗಳು ಕೊಡುತ್ತಿದ್ದ ನ್ಯಾಯಗಳೆಲ್ಲ ಅತಿ ಪ್ರಾಚೀನವಾಗಿ ನಡೆದು ಬಂದ ಪದ್ಧತಿಗಳ ಪ್ರಕಾರವೆಂದು ಹೇಳಲಾಗುತ್ತಿತ್ತು. ವಾಸ್ತವವಾಗಿ ಅವರು ಮಾಡುತ್ತಿದ್ದದ್ದು ಹೊಸ ಕಾಯಿದೆಗಳ ಸೃಷ್ಟಿ. ಅವರ ನ್ಯಾಯ ನಿರ್ಣಯದಲ್ಲಿ ಇಂಗ್ಲಿಷ್, ನಾರ್ಮನ್ ಇತ್ಯಾದಿ ಜನಾಂಗಗಳ ಪದ್ಧತಿಗಳು ಅನೇಕ ಕಡೆಗಳಲ್ಲಿ ಕಂಡುಬಂದಿವೆ. ರೋಮನ್ ನ್ಯಾಯವನ್ನು ಅವರು ಅಕ್ಷರಶಃ ತೆಗೆದುಕೊಳ್ಳದಿದ್ದರೂ ಅದನ್ನೂ ಬಳಸಿದ ನಿದರ್ಶನಗಳೂ ಇವೆ. ಸಂದರ್ಭಕ್ಕೆ ತಕ್ಕಂತೆ ಯಾವುದು ನ್ಯಾಯ ಕಾಣುತ್ತಿತ್ತೋ ಅದನ್ನು ಅವರು ಅನುಸರಿಸುತ್ತಿದ್ದರು.

ಇದರಿಂದಾಗಿ ಹಿಂದೆ ಮಾಡಿದ ತೀರ್ಪುಗಳು (ಪೂರ್ವನಿದರ್ಶನ) ಕಾನೂನಾಗಿ ಮಾರ್ಪಟ್ಟವು. ಒಂದೇ ರೀತಿಯ ಸಂಗತಿಗಳು ತನಿಖೆಗೆ ಬಂದಾಗ ಹಿಂದೆ ಅದೇ ಸಂದರ್ಭದಲ್ಲಿ ಕೊಟ್ಟ ತೀರ್ಪುಗಳನ್ನು ಮುಖ್ಯ ನ್ಯಾಯಾಲಯವೂ ಅದರ ಕೆಳಗಿನ ನ್ಯಾಯಾಲಯಗಳೂ ಅನುಸರಿಸದೆ ನಿರ್ವಾಹವಿರಲಿಲ್ಲ. ಇವು ಈಗಲೂ ಆಚರಣೆಯಲ್ಲಿರುವ ಪೂರ್ವನಿದರ್ಶನಗಳು (ಪ್ರಿಸಿಡೆಂಟ್ಸ್)ಗಳು, ಮೊಕದ್ದಮೆನ್ಯಾಯಗಳು (ಕೇಸ್ ಲಾ) ಇವುಗಳ ಮೂಲ. ಪುರ್ವನಿದರ್ಶನಗಳು ನೆಲೆಗೊಳಿಸಿದ ನ್ಯಾಯಗಳು ಬರಬರುತ್ತ ಬೆಳೆದುವು. ಇವುಗಳ ಕ್ರೋಡೀಕರಣ ಅಗತ್ಯವಾಯಿತು. ಒಂದನೆಯ ಎಡ್ವರ್ಡನ ಕಾಲದ ಲಾಗಾಯಿತು ನಮಗೆ ಇಂಥ ಕ್ರೋಡೀಕರಣಗಳು ದೊರೆಯುತ್ತವೆ. ನ್ಯಾಯಾಧೀಶರು ಕಾನೂನನ್ನು ಈ ರೀತಿ ವೃದ್ಧಿಪಡಿಸಲು ಸಮರ್ಥರಾಗಿದ್ದರೂ ಅವರಿಗೆ ಹಿಂದಿನ ತೀರ್ಪುಗಳಿಂದ ಉದ್ಭವಿಸಿದ ಹೊಸ ನ್ಯಾಯಗಳನ್ನು ಕೊಡಲು ಹಕ್ಕಿರಲಿಲ್ಲ. ಹೊಸ ಕಾನೂನನ್ನು ಕೊಡುವುದು ಶಾಸನಸಭೆಗಳ ಕೆಲಸ. ಇದರಿಂದಾಗಿ ಸಂಪ್ರದಾಯನ್ಯಾಯದ ಉಪಯೋಗ ಕುಂಠಿತವಾಯಿತು. ಸಂಪ್ರದಾಯ ನ್ಯಾಯ (ಕಾಮನ್ ಲಾ) ತುಂಬಲಾರದ ಸ್ಥಳವನ್ನು ಎಕ್ವಿಟಿ ಅಥವಾ ಸಾಮ್ಯನ್ಯಾಯ ತುಂಬಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ